ಬುಧವಾರ, ಮೇ 2, 2012

ಕವಿಗೋಷ್ಠೀ - 187

ಕವಿಗೋಷ್ಠೀ - 187

ಸ್ಥಳ : ಭಾರತೀಯ ವಿದ್ಯಾಮಂದಿರ ಪ್ರೌಢಶಾಲೆ                                ದಿನಾಂಕ : 06/05/2012        
          ಸಾಲಗಾಮೆ ರಸ್ತೆ, ಹಾಸನ, 573201                               ಸಂಚಾಲಕರು : ಶೀಟೀ

                   ಮನೆ ಮನೆ ಕವಿಗೋಷ್ಠೀಯ 187 ನೇ ಕಾರ್ಯಕ್ರಮವು ದಿನಾಂಕ- 06/05/2012 ನೇ ಭಾನುವಾರದಂದು ಸಂಜೆ 5-00 ರಿಂದ 6-30 ರವರಗೆ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಜರುಗಿತು.
 ಭಾಗವಹಿಸಿದ್ದ ಕವಿತಾಭ್ಯಾಸಿಗಳು : ಶ್ರೀ ಚಂದ್ರಕಾಂತ ಪಡೆಸೂರ, ಶೀಟೀ( ಸತ್ಯ ನಾರಾಯಣ),
                                                    ಡಾ|| ಜಯಚಂದ್ರ ಗುಪ್ತ, ಲಲಿತ ಎಸ್,  ಭೈರಪ್ಪಾಜಿ. ಎಲ್,
                                                    ದ್ಯಾವನೂರು ಮಂಜುನಾಥ್ ಮತ್ತು ಪ್ರದೀಪ್

ಕವನ - 1, ಒಡಲಾಳದ ಆಕ್ರಂದನ
ಕರುಳ ಕುಡಿಯ ಹೊಸಕಿ ಹಾಕಿ ಮುನಿದು ನೀತ ಕರ್ತನ
ಅಟ್ಟಹಾಸಗೈದು ನಲಿವ ಕ್ರೂರ ವಿಧಿಯ ನರ್ತನ
ತಮವು ಮುಸುಕಿ ಮನಸಿನಲ್ಲಿ ಹೇಯಕೃತ್ಯಗಯ್ಯುತಿಹುದು ||
                       ಧರ್ಮ ಯಾವುದಯ್ಯ ಕೊಲೆಗೆ ಶೋಷಣೆಯ ನೆಪದಿ ಸುಲಿಗೆ
                       ಕ್ರೂರ ನರ್ತನಕೆ ನಲುಗಿ ಇಂದು ಎಳೆಯ ಜೀವ ಸಿಲುಕಿ ಬಲಿಗೆ
                       ಪಶು ಪಕ್ಷಿಗಳು ಕುಡಿಯ ಕಂಡು ನಲಿವ ಪರಿಯ ತೋರಿದೆ
                       ಬುದ್ಧಿವಂತನೆಂದು ಮೆರೆವ ಮನುಜ ಮತಿಯು ಮೀರಿದೆ ||
ಹೊತ್ತು - ಹೆತ್ತು ಬೆಳೆಸಿದಂಥ ತಾಯಿ ಹೃದಯ ಮಿಡಿದಿದೆ
ಗಂಡು- ಹೆಣ್ಣು ಭೇದವೆನುವ ಕ್ರೂರ ಗ್ರಹವೆ ಬಡಿದಿದೆ
ದುಃಖಿಸುತ್ತ ಮೌನವಾಗಿ ನೋವ ನುಂಗಿ ಕುಳಿತಿದೆ
ತಾಯ ಒಡಲು ಕರುಳ ಹಿಂಡಿ ಒಳಗೆ ತಾನು ಅಳುತಿದೆ ||
                     ಬೇಲಿ ಎದ್ದು ಬಂದು ಭರದಿ ಬೆಳೆಯ ತಾನು ಮೇಯ್ಯಿತು
                     ಅಕಾಲ ಮೃತ್ಯು ಬಂದು ಎಳೆಯ ಜೀವವನ್ನೆ ಒಯ್ದಿತು
                     ಎಳೆಯ ಕೂಸಿನಳವು ಇಲ್ಲಿ ಜನಕೆ ಕೇಳದಾಯಿತು
                     ಪಂಚಭೂತಗಳಲಿ ತಾನು ಲೀನವಾಗಿ ಹೋಯಿತು ||
ಲೇಖಕ - ಶೀಟೀ( ಸತ್ಯ ನಾರಾಯಣ)
             ಎಂ.ಸಿ.ಎಫ್, ಹಾಸನ

ಕವನ - 2,  ಮತ್ತೊಂದು ಮಹಾಭಾರತ
ಜಗ ಒಂದು ಪಗಡೆಯ ಹಾಸು
ದಾಳ ಉರುಳಿದ ಸದ್ದಿಲ್ಲ
ದ್ಯೂತ ನಡೆದ ಸುಳಿವಿಲ್ಲ
ಅಲ್ಲಲ್ಲಿ ಆಧುನಿಕ ಶಕುನಿಗಳ ಸಂತೆ
ನಿತ್ಯ ದುರ್ಯೋಧನ ಪರ್ವ
                      ಭೂಮಿ, ಕಾಮಿನಿ, ಕಾಂಚಾಣಗಳ ಕಾಮನೆಯಲಿ
                      ಧರ್ಮರಾಯನ ಮಣಿಸುವರು
                      ಸಜ್ಜನರ ಸೊಲ್ಲಡಗಿಸುವರು
                      ಅರ್ಥ ಕಾಮ ಪುರುಷಾರ್ಥಗಳ ಸಾಧಕರು
                      ಒಬ್ಬರು ಇಬ್ಬರಲ್ಲ
 ರಣವಿದೆ ಕಹಳೆಯಿಲ್ಲ
ನಿತ್ಯ ಅಥರ್ಮ ಯುದ್ಧ
ಮಾತಿಗರ್ಥವಿಲ್ಲ
ಅಂತರಂಗವ ಅರಿಯುವವರಿಲ್ಲ
ಗ್ರಂಥಗಳಾಗಲಿಲ್ಲ ಪುಡುರಗಳೆಗಳು
 ಎಲ್ಲ, ಕಾಲಗರ್ಭದಲ್ಲಿ ಮುಂದೊಮ್ಮೆ
ಸೇರಿ ಹೋಗುವ ಪ್ರಾತ್ರಗಳು.
 ಲೇಖಕಿ - ಲಲಿತ. ಎಸ್
ಹಾಸನ
 ಕವನ - 3, ಕತ್ತಲು X ಬೆಳಕು
ಕತ್ತಲು ಕತ್ತಲಾಗೇ ಇರಬೇಕು
ಬೆಳಕು ಬೇಡವಾಗಿದೆ ಇವರಿಗೆ
          ಕತ್ತಲಲ್ಲಿ ಮಿಂದು ಕತ್ತಲಲ್ಲೇ ನೊಂದು
          ಬೇಯಬೇಕೆನ್ನುವವರಿಗೆ
          ಸಹ್ಯವಾದೀತೇ ಬೆಳಕಿನ ಕುಡಿನೋಟ.
ಕತ್ತಲಲ್ಲೆ ಬದುಕು ಕಟ್ಟಿಕೊಂಡವರಿಗೆ
ಏಕಾಗಿ ಬೆಳಕಿನ ಮಜ್ಜನ ?
ಬೆಳಕಿದ್ದರೆ ಬೆತ್ತಲಾದೀತು
ಇವರೆಲ್ಲರ ಬದುಕಿನ ಬಯಲಾಟ.
                  ಕತ್ತಲನ್ನೇ ಉಟ್ಟು ಕತ್ತಲನ್ನೇ ತೊಟ್ಟು
                  ಕತ್ತಲನ್ನೇ ಹೊದ್ದು ಕತ್ತಲನ್ನೇ ತಬ್ಬಿ
                  ಮಲಗಿದವರಿಗೆ ಕಂಡೀತೇ
                  ಬೆಳಗಿನ ಸವಿಗನಸು !
 ಲೇಖಕ : ಭೈರಪ್ಪಾಜಿ. ಎಲ್ 
ಹಾಸನ 
ಕವನ - 4, ಹನಿಗವನಗಳು
             ಹನಿಗವನ - 1          
 ಕಂಟಕ ನಿವಾರಣಗೆಂದು
 ಶನಿದೇವರ ಗುಡಿಗೆ
 ಮಾಜಿ ಮುಖ್ಯ ಮಂತ್ರಿಗಳು
 ಭೇಟಿ ನೀಡಿದರು
 ಶನಿದೇವರಿಗೀಗ
 ಏಳು ವರ್ಷಗಳ ಕಾಟ !
                ಹನಿಗವನ - 2
 ನನ್ನ ಶ್ರೀಮತಿ ನನ್ನೊಂದಿಗೆ
 ಎಷ್ಟೇ ಜಗಳವಾಡಿದರೂ
 ತವರು ಮನೆಗೆ ಹೋಗುತ್ತೇನೆಂದು
 ಹೆದರಿಸುವಂತಿಲ್ಲ - ಏಕೆಂದರೆ
 ನಾನಿರುವುದೇ ಮಾವನ ಮನೆಯಲ್ಲಿ !
                ಹನಿಗವನ - 3
 ಗೆಳತಿಯೊಡನಾಗಲೀ, ಶ್ರೀಮತಿಯೊಡನಾಗಲೀ
 ಹೋಟೆಲ್ಲಿಗೆ ಹೋಗಿ
 ಬೈಟು ದೋಸಿ, ಬೈಟೂ ಕಾಫೀ ಕುಡಿದರೂ
 ಬಿಲ್ಲು ಇಡಿಯಾಗಿ ಬರುವುದು
 ನನ್ನ ಕೈಗೆ ಮಾತ್ರ
ಲೇಖಕ - ಡಾ|| ಜಯಚಂದ್ರಗುಪ್ತ ಕೆ.ಕೆ
ಹಾಸನ

ಕವನ - 5, ಕಪಟ
ಖಾದಿ, ಕಾವಿಯ ತೊಟ್ಟು
ಖಾಕಿಯ ಕೈಯಲಿ ಹಿಡಿದು
ಕಡಿಯುವರು ಕುರಿಯಂತೆ
ನನ್ನ ಬಂಧುಗಳಾ ಗುಣವಾ
ಹಾರವಾ ಧರಿಸಿ ಪೂಜಿಸಿದಂತೆ,
                     ದೆವ್ವ ದೇವರು ಎನುತಾ
                     ನರರ ಬುರುಡೆಯ ಹಿಡಿದು
                     ನಿಂಬೆಯ ಹಣ್ಣಿನಲಿ ಭಯವಿಟ್ಟು
                     ಬರಿದ ಮಾಡ್ವರು ಕಿಸೆಯ
ಸತ್ಯ ಸುಳ್ಳುಗಳೆನುತ
ಎದೆಗೆ ಚಿನ್ನದಾ ಬರೆಯಿಟ್ಟು
ದೋಚಿದರು ಎಲ್ಲವನು
ನೋಯಿಸಿ ಬರೆಸುವರು ಅಳುವಾ
ವಸ್ತ್ರದೊಳು ಕಾವನಿಟ್ಟು
                    ಕೊಡೆಯಿಡಿವರು ಮಳೆಗೆ
                    ದಡವು ನೆತ್ತಿಗೆ ತಾಕುವಂತೆ
                    ಕೈಯಿಡುವರು ತಲೆಗೆ
                    ಒದ್ದೆಯ ಒರೆಸುವಂತೆ
                    ಕಾಣ್ವರು ಎಲ್ಲಾ ಬೆಳ್ಳನೆ
ಲೇಖಕ - ಪ್ರದೀಪ್, ಹಾಸನ

 ಕವನ - ಯಾರಿವಳು 
ಯಾರಿವಳು .......  ಆಹ ಯಾರಿವಳು .......
ಪ್ರೀತಿಯ ಬೀಜವ ನನ್ನಲಿ ಬಿತ್ತಿದವಳು
                ಊರಗೌಡನ ತೋಟ್ಟಿ ಮನೆಯಲಿ
                ಕದ್ದು ನಿಂತು ಮುಗುಳ್ನಗೆ ಬೀರಿದವಳು
               ಮಲ್ಲಿಗೆ ಹೂ ಮುಡಿಯಲಿರಿಸಿ ತಳತಳ ಹೋಳೆದವಳು
ಅಲ್ಲಿಗೂ ಬಂದು ಇಲ್ಲಿಗೂ ಬಂದು
ಮನದಲ್ಲೆ ಯಾರನೋ ಹುಡುಕುತಿಹಳು
ತನ್ನ ಹಾಡಲ್ಲೇ ಪ್ರೀತಿಯ ನವಿ ನವಿದವಳು
               ನವುಳಂತೆ ಮನದಲ್ಲೇ ಕುಣಿದಿಹಳು
               ಇವಳಂದಕ್ಕೆ ಹುಣ್ಣಿಮೆ ಚಂದಿರನೆ ನಾಚಿದನು.
               ಹೋ ಕತ್ತಲೆಯಲ್ಲೇ ಬೆಳಕ ನೀಗಿಸುವಳು.
ಲೇಖಕ - ದ್ಯಾವನೂರು ಮಂಜುನಾಥ್
ಹಾಸನ
      
ಸಂಚಾಲಕರು 
ಮನೆಮನೆ ಕವಿಗೋಷ್ಠೀ-187

ಕವಿಗೋಷ್ಠೀ-186


ಸ್ಥಳ : ಶ್ರೀ ಸುರೇಶ್ ಗುರೂಜಿ ನಿವಾಸ                                                   ದಿನಾಂಕ : 01/04/2012
         ರಂಗೋಲಿ ಹಳ್ಳ, ಉತ್ತರ ಬಡಾವಣೆ,                                     ಸಂಚಾಲಕರು : ಶೀಟೀ
         ಹಾಸನ- 573201

                ಏಪ್ರಿಲ್ -2012, ತಿಂಗಳ ಮನೆ ಮನೆ ಕವಿಗೋಷ್ಠಿಯು ದಿನಾಂಕ 01/04/2012 ನೇ ಭಾನುವಾರದಂದು ಹಾಸನ ನಗರದ ಉತ್ತರ ಬಡಾವಣೆಯ ರಂಗೋಲಿ ಹಳ್ಳದಲ್ಲಿರುವ ಶ್ರೀ ಸುರೇಶ್ ಗುರೂಜಿಯವರ ನಿವಾಸದಲ್ಲಿ ನಡೆಯಿತು
        ಭಾಗವಹಿಸಿದ ಕವಿತಾಭ್ಯಾಸಿಗಳು : ಶ್ರೀಯುತರಾದ ಚಂದ್ರಕಾಂತ ಪಡೆಸೂರ,ಶೀಟೀ(ಸತ್ಯ ನಾರಾಯಣ),
                                                            ಎ.ಎಲ್, ಚನ್ನೇಗೌಡರು, ಸುರೇಶ್ ಗುರೂಜಿ,  ಶ್ರೀನಿವಾಸ ಡಿ ಶೆಟ್ಟಿ,
                                                            ಗೊರೂರು ಅನಂತರಾಜು, ಗೊರೂರು ಮಂಜೇಶ್,
                                                            ಡಾ|| ಜಯಚಂದ್ರ ಗುಪ್ತ, ಜಯದೇವಪ್ಪ,  ಧರ್ಮರಾಜ ಕಡಗ,
                                                            ದೊಡ್ಡಳ್ಳಿ ರಮೇಶ್,  ಭೈರಪ್ಪಾಜಿ ಎಲ್, ಡಿ.ಜೆ ಮಂಜುನಾಥ,
                                                            ಪರಮೇಶ್ ತ್ಯಾವಿನಹಳ್ಳಿ  ಮತ್ತು ಶ್ರೀಮತಿಯರಾದ
                                                            ರಾಜೇಶ್ವರೀ ಹುಲ್ಲೇನಹಳ್ಳಿ, ರೂಪ  ಆರ್,
                                                            ಲಲಿತ ಎಸ್,  ದೇವೀರಮ್ಮ, 

    ಕವನ -1, ನಾನು ಪಂಜರದ ಹಕ್ಕಿ     
  ನಾನು ಪಂಜರದ ಹಕ್ಕಿ 
  ಯಾವ ತಪ್ಪಿಗೆ ನನಗೆ ಈ ಶಿಕ್ಷೆ
  ನನ್ನ ಬಣ್ಣವೇ ನನಗೆ ಶತ್ರುವಾಯ್ತೇನೋ !
  ನನ್ನ ದನಿಯೇ ನನಗೆ ಶಾಪವಾಯ್ತೇನೊ !

                     ಯಾರ ಸಂತಸಕೆ ನನಗೆ ಈ ಭಂಗ
                     ನನ್ನವರ ಬಳಿಯಿರದೆ ಈ ಪಂಜರದ ಸಂಗ
                     ಮಳೆಯಲ್ಲಿ ನೆಂದ ತರುವಲ್ಲಿ ನನ್ನ ಮನೆ
                     ಬಂಧುಗಳ ಪ್ರೀತಿಯಲಿ ತೇಲಿತ್ತು ನನ್ನ ಮನ
                     ನಾನೆಂದರೆ ಅಮ್ಮನಿಗೆ ಮಿಗಿಲಾದ ಪ್ರೇಮ
                     ಹೇಗೆ ಇರುವಳೋ ನಾನಿಲ್ಲದೇ ನನ್ನಮ್ಮ
  ಮುಂಜಾನೆಯ ಗಾಳೀಯಲಿ ತೇಲಿ ಹೋಗುತ್ತಿದ್ದೆ
  ಗೋಧೂಳಿ ವೇಳೆಯಲಿ ಹಾರಿ ಮನೆ ಸೇರುತ್ತಿದ್ದೆ
  ನಾನಿಲ್ಲಿ ಹಾಡಲಾರೆ, ಹಾರಲಾರೆ
  ನಿಮ್ಮೆದೆಯ ಗೂಡಿನಲಿ ಕರುಣೆಯ ಸೆಲೆ ಇರಲಿ
  ನಿಮ್ಮ ಕಿವಿಯಲಿ ನನ್ನ ಗಾನಸಿರಿ ಅನುರಣೆಸಲಿ
                         ನೀವಾದರೂ ಹೇಳಿ ಪಂಜರದ ಕದ ತೆರೆಯುವಂತೆ
                         ನನ್ನವರ ನಾ ಸೇರುವಾಗ ಬಾಳ ಹೊಸ ಪಯಣ ಶುರುವಾದಂತೆ.
ಲೇಖಕಿ- ಲಲಿತ.ಎಸ್, ಹಾಸನ

ಕವನ-2,  ಹನಿಗವನಗಳು

ಹನಿಗವನ- 1,   ಸಾಟಿ    
ತೃಣ ಬೇವಿನ ಕಹಿಯ ನೀಗಲು ಬೇಕು ಬೆಲ್ಲದುಂಡೆ.
ಮಣ ಬೆಲ್ಲದ ಸಿಹಿಯ ಕಳೆಯಲು ಸಾಕು
ಬೇವಿನ ಕಣವೊಂದೇ !
ಹನಿಗವನ-2,    ಸಮಯ

    ಹೇ ಸಮಯ
  ನಿನಗುಂಟೇ
             ಒಂದರೆಚಣ ನಿಂತು
                   ವಿರಮಿಸಲು ಸಮಯ !!
ಲೇಖಕಿ- ರಾಜೇಶ್ವರೀ ಹುಲ್ಲೇನಹಳ್ಳಿ
    "ಸೂರು" ಕುವೆಂಪು ನಗರ, 
ಹಾಸನ - 5732012, 
ಮೊಬೈಲ್- 9141350600


ಕವಿತೆ -3,    ಮಾತೆಂಬ ಮಾಣಿಕ್ಯ

ಮಾತು, ಎದೆಯಿಂದಲೇ ಮದ್ದು ತಂದು
ಜಗಕೆ ಕಣ್ಣ ಬಿಡಿಸಬೇಕು
ಬಿಗಿದ ಮುಖ ಬಿಚ್ಚಿದ ಪಕಳೆಯಾಗಿ
ಪರಿಮಳ ಚೆಲ್ಲಬೇಕು |

                 ಅಕ್ಕ- ಅಣ್ಣ-ಅಲ್ಲಮ ಆಡಿದ್ದು ಮಾತೆ
                 ವಚನಗಳಾಗಿ ಬೆಳೆದವು
                 ಅನುಭಾವದವೃತ ಕುಡಿದರೂನು
                 ನಮ್ಮ ನಾಲಗೆ ಈಗ ಗರಗಸ !
ಸುಮ್ಮನಿರಲಾರದಕ್ಕೆ ಸುಮ್ಮನಾಡುವ ಮಾತು
ಆಸ್ಥಾನದಿಂದ ಆಸ್ಥಾನಕ್ಕೆ ಅದಲು-ಬದಲು
 ನಲುಮೆ-ಕುಲುಮೆಗೆ ಬಿದ್ದು ದಿಕ್ಕು ಕವಲು  |
                    ಪಡೆಯಲಾಗದು ಕೊಟ್ಟ ಮಾತು ಬಿಟ್ಟ ಬಾಣದಂತೆ
                    ಕೊಡುವುದಿರಲಿ, ಮಾತಿನಲಿ ಜೀವ ಕೆಡಹುವುದು ಸದ್ಯ ಸಲೀಸು |
                    ಮಾತು ಕೊಟ್ಟು ಗೆದ್ದವರು ತಪ್ಪಿ ನಡೆದವರು
                    ಇತಿಹಾಸದ ತುಂಬ ಕೊಡುವುದು, ತಪ್ಪುವುದು
                    ವರ್ತಮಾನದ ವಿದ್ಯಮಾನ |
ನುಡಿನಡೆಯೊಳಗೊಂದಾಗಿ ನಮಗೊಪ್ಪದ ಮಂತ್ರ
ಅನರ್ಥಗಳು ಗಾಳಿಯಲ್ಲಿ ಹಾರಾಡುವುದೇ ಸೂತ್ರ.
                                   ಸಿಡಿಯುತ್ತವೆ ಮಾತಿನ ಮದ್ದು ಮೂರಕ್ಕೆ ಆರಾಗಿ
                                   ಬೆಂಕಿಯಾಗಿ ಬಿರುಗಾಳಿಯಾಗಿ ಪ್ರವಾಹವಾಗಿ
                                   ಬದುಕು ಬೆಂಡಾಗಿ ಪ್ರಭುವೇ
                                   ಸಾಕು ಮರದಷ್ಟು ಮಾತು
                                   ಹಕ್ಕಿಯಷ್ಟು ಹಾಡು.
                       ಲೇಖಕಿ- ರೂಪ ಆರ್
                        ನಂ-660, 10ನೇ ಕ್ರಾಸ್, ಮೊದಲ ಮಹಡಿ
ಕೆ.ಆರ್.ಪುರಂ, ಹಾಸನ- 573201
ಮೊಬೈಲ್- 9481934259

ಕವಿತೆ -4,    ಸೃಷ್ಟಿ ಎಂಬ ವೃಕ್ಷ
ಸೃಷ್ಟಿಯೆಂಬ ವೃಕ್ಷ ಸತ್ತು ಬಿದ್ದಿದೆ ನಾಗರೀಕತೆಯ ಪಾಪ ಕೂಪದಲಿ
ಪಾಪಕೂಪದ ಆಳವೆಷ್ಟೋ ? ಅಳೆಯಬಲ್ಲ ಧೀರನಾರೋ ?
                              ಪಾಪಜಲವು ಬತ್ತಲಾರದೇ ? ಪುಣ್ಯದ ಮಳೆ ಬಾರದೇ ?
                              ಬರದಿದ್ದರೆ ಧರೆಗಿಳಿಸುವ ಆಧುನಿಕ ಭಗೀರಥನಾರೋ ?
ತರಬೇಕು ಎತ್ತಿ ತರಬೇಕು ಸೃಷ್ಟಿಯ ಮೂಲ ಬೀಜವ
ಬಿತ್ತಬೇಕು ಹಸನಾದ ಹೊಲದಲ್ಲಿ
ಹರಿಸಬೇದು ಪುಣ್ಯಧಾರೆಯ 
                                   ಪುಣ್ಯ ಧಾರೆಯು ಸಾಲದು, ಪುಣ್ಯ ಪ್ರವಾಹವೇ ಬೇಕು!
                                   ಪುಣ್ಯ ಪ್ರವಾಹವೊಂದೇ ಉಳಿಸಬಲ್ಲದು ಸೃಷ್ಟಿಯ
                                   ಕೊಚ್ಚಿ ತೊಳೆಯಬಲ್ಲದು ನಾಗರೀಕತೆಯ ಕಲುಷವ.
ಲೇಖಕ- ಭೈರಪ್ಪಾಜಿ ಎಲ್, ಹಾಸನ

(ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿಗಳು ತಮ್ಮ ಸ್ವರಚಿತ ಕವನದ ಪ್ರತಿಗಳನ್ನು ಕವಿಗೋಷ್ಠಿಯ ಸಂಚಾಲಕರಿಗೆ ನೀಡದ ಕಾರಣ ವಾಚಿಸಿದ ಎಲ್ಲಾ ಕವನಗಳನ್ನು ಪ್ರಕಟಿಸಲಾಗಿಲ್ಲ, ಇದಕ್ಕಾಗಿ ಕ್ಷಮೆಯನ್ನು ಯಾಚಿಸುತ್ತೇವೆ)

                    
          ಕಾರ್ಯಕ್ರಮದ ಸಂಕ್ಷಿಪ್ತ ವರದಿ                           
                    ಸಂಜೆ 5-00 ಗಂಟೆಗೆ ಶ್ರೀಮತೀ ದೇವೀರಮ್ಮನವರ ಪ್ರಾರ್ಥನೆಯೊಂದಿಗೆ ಕವಿಗೋಷ್ಠೀ ಆರಂಭವಾಯಿತು, ನಂತರ ನವ್ಯ ಸಾಹಿತ್ಯದ ಹೊಸ ಹೊಳಹುಗಳು ಎಂಬ ವಿಷಯದ ಬಗ್ಗೆ ಕವಿಗೋಷ್ಠೀ-185 ರಲ್ಲಿ ಆರಂಭವಾದ ಸಂವಾದ ಕವಿಗೋಷ್ಠೀ-186 ರಲ್ಲೂ ಮುಂದುವರೆಯಿತು,  ಇಲ್ಲಿ ನವೋದಯ ಸಾಹಿತ್ಯ ಮತ್ತು ನವ್ಯ ಸಾಹಿತ್ಯ ಇವುಗಳನ್ನು ವಿಂಗಡಿಸಲು ಮಾನದಂದ(ಅಳತೆಗೋಲು) ಏನು ಎಂಬ ಕೇಳುಗರ ಪ್ರಶ್ನೆಗೆ ಚಂದ್ರಕಾಂತ ಪಡೆಸೂರ ಅವರು ಈ ಎರಡೂ ಸಾಹಿತ್ಯ ಚಳುವಳಿಗಳ ವ್ಯತ್ಯಾಸಗಳನ್ನು ತಿಳಿಸಿದರು, ಕಾವ್ಯದ ವ್ಯತ್ಯಾಸಕ್ಕೆ ಕಾವ್ಯದ ವಸ್ತು, ಕಾವ್ಯದ ಸ್ವರೂಪ, ಕಾವ್ಯದ ಧೋರಣೆ ಮುಖ್ಯವಾಗಿ ಕಾರಣವೆಂದು ತಿಳಿಸಿದ ಅವರು ಈ ಮಾನದಂಡಗಳಿಂದಲೇ ನವೋದಯ, ನವ್ಯ ಸಾಹಿತ್ಯ ಚಳುವಳಿಗಳ ವ್ಯತ್ಯಾಸಗಳನ್ನು ಗುರುತಿಸಬೇಕೆಂದರು. ನವೋದಯ ಚಳುವಳಿಯಲ್ಲಿನ ಕಾವ್ಯದ ವಸ್ತುಗಳು ದೇಶಪ್ರೇಮ, ಆಧ್ಯಾತ್ಮಿಕ ಪ್ರೇರಣೆ, ಹಾಗೂ ಪ್ರಾಕೃತಿಕ ಸೌಂದರ್ಯದ(ಸತ್ಯಂ, ಶಿವಂ, ಸುಂದರಂ) ಅಂಶಗಳು ಹೆಚ್ಚಾಗಿದ್ದು, ಸ್ವತಂತ್ರ ಚಳುವಳಿಯ ಪ್ರಭಾವ ಈ ಚಳುವಳಿಯ ಕಾವ್ಯದಲ್ಲಿ ಕಂಡುಬರಬಹುದಾಗಿದ್ದು ಸೌಂದರ್ಯದ ಉಪಾಸನೆಯೇ ಕಾವ್ಯದ ಪ್ರಮುಖ ದೋರಣೆಯಾಗಿದೆ. ಎಂದು ತಿಳಿಸಿ  ಇದಕ್ಕೆ ವಿರುದ್ಧವಾಗಿ ನವ್ಯ ಕಾವ್ಯದಲ್ಲಿ ಸಮಾಜದ ಕ್ರಿಯೆಯನ್ನು/ಮಾನವನ ಭಾವ ಮತ್ತು ಮನಸ್ಸನ್ನು ಎಲ್ಲಾ ಮಗ್ಗುಳುಗಳಿಂದ ವೀಕ್ಷಿಸಿ ಸಂಕೇತ ಪ್ರತಿಮಾ ವಿಧಾನಳನಗಳನ್ನು ಅನುಸರಿಸಿ ಕಡಿಮೆ ಶಬ್ದಗಳಿಂದ ಹೆಚ್ಚು ಅರ್ಥಹೊಮ್ಮುವಂತೆ ವ್ಯಂಗ್ಯದ/ಧ್ವನಿಯ ಮಾರ್ಗವನ್ನನುಸರಿಸಿ ಕಾವ್ಯ ರಚನೆ ಕಂಡುಬರುತ್ತದೆ. ಭ್ರಮನಿರಸನದಿಂದ ಉಂಟಾದ ಪ್ರಗತಿಶೀಲತೆಯೇ ನವ್ಯ ಕಾವ್ಯದ ದೋರಣೆಯೆಂದು ಅವರು ವಿವರಿಸಿದರು,  ಇದನ್ನು ಅನುಸರಿಸಿ ಮುಂದಿನ ಕಾಲದಲ್ಲಿ  ಕನ್ನಡ ಸಾಹಿತ್ಯದಲ್ಲಾದ ಆಗುತ್ತಿರುವ/ಆಗುತ್ತಿರುವ ಬದಲಾವಣೆಯನ್ನು ಕುರಿತು ಎಲ್ಲಾರೂ ಸಂವಾದ ನಡೆಸಿದರು, 
               
                   ನಂತರ ಶ್ರೀ ದೊಡ್ಡಳ್ಳಿರ ರಮೇಶ್ ರವರು ಸುಶ್ರಾವ್ಯವಾದ ಜನಪದ ಗೀತೆಯನ್ನು, ಶ್ರೀಮತಿ ದೇವೀರಮ್ಮನವರು ವಚನವನ್ನು ಹಾಡಿದರು,  ಅನಂತರ ಭಾಗವಹಿಸಿದ್ದ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು, ಶೀಟೀಯವರು ವಂದಿಸಿದರು, ಸಂಜೆ 5-00 ಗಂಟೆಗೆ ಆರಂಭವಾದ ಕವಿಗೋಷ್ಠೀ 7-30 ಕ್ಕೆ ಮುಕ್ತಾಯವಾಯಿತು.

ಸಂಚಾಲಕರು
ಮನೆಮನೆ ಕವಿಗೋಷ್ಠೀ