ಬುಧವಾರ, ಮೇ 2, 2012

ಕವಿಗೋಷ್ಠೀ - 187

ಕವಿಗೋಷ್ಠೀ - 187

ಸ್ಥಳ : ಭಾರತೀಯ ವಿದ್ಯಾಮಂದಿರ ಪ್ರೌಢಶಾಲೆ                                ದಿನಾಂಕ : 06/05/2012        
          ಸಾಲಗಾಮೆ ರಸ್ತೆ, ಹಾಸನ, 573201                               ಸಂಚಾಲಕರು : ಶೀಟೀ

                   ಮನೆ ಮನೆ ಕವಿಗೋಷ್ಠೀಯ 187 ನೇ ಕಾರ್ಯಕ್ರಮವು ದಿನಾಂಕ- 06/05/2012 ನೇ ಭಾನುವಾರದಂದು ಸಂಜೆ 5-00 ರಿಂದ 6-30 ರವರಗೆ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಜರುಗಿತು.
 ಭಾಗವಹಿಸಿದ್ದ ಕವಿತಾಭ್ಯಾಸಿಗಳು : ಶ್ರೀ ಚಂದ್ರಕಾಂತ ಪಡೆಸೂರ, ಶೀಟೀ( ಸತ್ಯ ನಾರಾಯಣ),
                                                    ಡಾ|| ಜಯಚಂದ್ರ ಗುಪ್ತ, ಲಲಿತ ಎಸ್,  ಭೈರಪ್ಪಾಜಿ. ಎಲ್,
                                                    ದ್ಯಾವನೂರು ಮಂಜುನಾಥ್ ಮತ್ತು ಪ್ರದೀಪ್

ಕವನ - 1, ಒಡಲಾಳದ ಆಕ್ರಂದನ
ಕರುಳ ಕುಡಿಯ ಹೊಸಕಿ ಹಾಕಿ ಮುನಿದು ನೀತ ಕರ್ತನ
ಅಟ್ಟಹಾಸಗೈದು ನಲಿವ ಕ್ರೂರ ವಿಧಿಯ ನರ್ತನ
ತಮವು ಮುಸುಕಿ ಮನಸಿನಲ್ಲಿ ಹೇಯಕೃತ್ಯಗಯ್ಯುತಿಹುದು ||
                       ಧರ್ಮ ಯಾವುದಯ್ಯ ಕೊಲೆಗೆ ಶೋಷಣೆಯ ನೆಪದಿ ಸುಲಿಗೆ
                       ಕ್ರೂರ ನರ್ತನಕೆ ನಲುಗಿ ಇಂದು ಎಳೆಯ ಜೀವ ಸಿಲುಕಿ ಬಲಿಗೆ
                       ಪಶು ಪಕ್ಷಿಗಳು ಕುಡಿಯ ಕಂಡು ನಲಿವ ಪರಿಯ ತೋರಿದೆ
                       ಬುದ್ಧಿವಂತನೆಂದು ಮೆರೆವ ಮನುಜ ಮತಿಯು ಮೀರಿದೆ ||
ಹೊತ್ತು - ಹೆತ್ತು ಬೆಳೆಸಿದಂಥ ತಾಯಿ ಹೃದಯ ಮಿಡಿದಿದೆ
ಗಂಡು- ಹೆಣ್ಣು ಭೇದವೆನುವ ಕ್ರೂರ ಗ್ರಹವೆ ಬಡಿದಿದೆ
ದುಃಖಿಸುತ್ತ ಮೌನವಾಗಿ ನೋವ ನುಂಗಿ ಕುಳಿತಿದೆ
ತಾಯ ಒಡಲು ಕರುಳ ಹಿಂಡಿ ಒಳಗೆ ತಾನು ಅಳುತಿದೆ ||
                     ಬೇಲಿ ಎದ್ದು ಬಂದು ಭರದಿ ಬೆಳೆಯ ತಾನು ಮೇಯ್ಯಿತು
                     ಅಕಾಲ ಮೃತ್ಯು ಬಂದು ಎಳೆಯ ಜೀವವನ್ನೆ ಒಯ್ದಿತು
                     ಎಳೆಯ ಕೂಸಿನಳವು ಇಲ್ಲಿ ಜನಕೆ ಕೇಳದಾಯಿತು
                     ಪಂಚಭೂತಗಳಲಿ ತಾನು ಲೀನವಾಗಿ ಹೋಯಿತು ||
ಲೇಖಕ - ಶೀಟೀ( ಸತ್ಯ ನಾರಾಯಣ)
             ಎಂ.ಸಿ.ಎಫ್, ಹಾಸನ

ಕವನ - 2,  ಮತ್ತೊಂದು ಮಹಾಭಾರತ
ಜಗ ಒಂದು ಪಗಡೆಯ ಹಾಸು
ದಾಳ ಉರುಳಿದ ಸದ್ದಿಲ್ಲ
ದ್ಯೂತ ನಡೆದ ಸುಳಿವಿಲ್ಲ
ಅಲ್ಲಲ್ಲಿ ಆಧುನಿಕ ಶಕುನಿಗಳ ಸಂತೆ
ನಿತ್ಯ ದುರ್ಯೋಧನ ಪರ್ವ
                      ಭೂಮಿ, ಕಾಮಿನಿ, ಕಾಂಚಾಣಗಳ ಕಾಮನೆಯಲಿ
                      ಧರ್ಮರಾಯನ ಮಣಿಸುವರು
                      ಸಜ್ಜನರ ಸೊಲ್ಲಡಗಿಸುವರು
                      ಅರ್ಥ ಕಾಮ ಪುರುಷಾರ್ಥಗಳ ಸಾಧಕರು
                      ಒಬ್ಬರು ಇಬ್ಬರಲ್ಲ
 ರಣವಿದೆ ಕಹಳೆಯಿಲ್ಲ
ನಿತ್ಯ ಅಥರ್ಮ ಯುದ್ಧ
ಮಾತಿಗರ್ಥವಿಲ್ಲ
ಅಂತರಂಗವ ಅರಿಯುವವರಿಲ್ಲ
ಗ್ರಂಥಗಳಾಗಲಿಲ್ಲ ಪುಡುರಗಳೆಗಳು
 ಎಲ್ಲ, ಕಾಲಗರ್ಭದಲ್ಲಿ ಮುಂದೊಮ್ಮೆ
ಸೇರಿ ಹೋಗುವ ಪ್ರಾತ್ರಗಳು.
 ಲೇಖಕಿ - ಲಲಿತ. ಎಸ್
ಹಾಸನ
 ಕವನ - 3, ಕತ್ತಲು X ಬೆಳಕು
ಕತ್ತಲು ಕತ್ತಲಾಗೇ ಇರಬೇಕು
ಬೆಳಕು ಬೇಡವಾಗಿದೆ ಇವರಿಗೆ
          ಕತ್ತಲಲ್ಲಿ ಮಿಂದು ಕತ್ತಲಲ್ಲೇ ನೊಂದು
          ಬೇಯಬೇಕೆನ್ನುವವರಿಗೆ
          ಸಹ್ಯವಾದೀತೇ ಬೆಳಕಿನ ಕುಡಿನೋಟ.
ಕತ್ತಲಲ್ಲೆ ಬದುಕು ಕಟ್ಟಿಕೊಂಡವರಿಗೆ
ಏಕಾಗಿ ಬೆಳಕಿನ ಮಜ್ಜನ ?
ಬೆಳಕಿದ್ದರೆ ಬೆತ್ತಲಾದೀತು
ಇವರೆಲ್ಲರ ಬದುಕಿನ ಬಯಲಾಟ.
                  ಕತ್ತಲನ್ನೇ ಉಟ್ಟು ಕತ್ತಲನ್ನೇ ತೊಟ್ಟು
                  ಕತ್ತಲನ್ನೇ ಹೊದ್ದು ಕತ್ತಲನ್ನೇ ತಬ್ಬಿ
                  ಮಲಗಿದವರಿಗೆ ಕಂಡೀತೇ
                  ಬೆಳಗಿನ ಸವಿಗನಸು !
 ಲೇಖಕ : ಭೈರಪ್ಪಾಜಿ. ಎಲ್ 
ಹಾಸನ 
ಕವನ - 4, ಹನಿಗವನಗಳು
             ಹನಿಗವನ - 1          
 ಕಂಟಕ ನಿವಾರಣಗೆಂದು
 ಶನಿದೇವರ ಗುಡಿಗೆ
 ಮಾಜಿ ಮುಖ್ಯ ಮಂತ್ರಿಗಳು
 ಭೇಟಿ ನೀಡಿದರು
 ಶನಿದೇವರಿಗೀಗ
 ಏಳು ವರ್ಷಗಳ ಕಾಟ !
                ಹನಿಗವನ - 2
 ನನ್ನ ಶ್ರೀಮತಿ ನನ್ನೊಂದಿಗೆ
 ಎಷ್ಟೇ ಜಗಳವಾಡಿದರೂ
 ತವರು ಮನೆಗೆ ಹೋಗುತ್ತೇನೆಂದು
 ಹೆದರಿಸುವಂತಿಲ್ಲ - ಏಕೆಂದರೆ
 ನಾನಿರುವುದೇ ಮಾವನ ಮನೆಯಲ್ಲಿ !
                ಹನಿಗವನ - 3
 ಗೆಳತಿಯೊಡನಾಗಲೀ, ಶ್ರೀಮತಿಯೊಡನಾಗಲೀ
 ಹೋಟೆಲ್ಲಿಗೆ ಹೋಗಿ
 ಬೈಟು ದೋಸಿ, ಬೈಟೂ ಕಾಫೀ ಕುಡಿದರೂ
 ಬಿಲ್ಲು ಇಡಿಯಾಗಿ ಬರುವುದು
 ನನ್ನ ಕೈಗೆ ಮಾತ್ರ
ಲೇಖಕ - ಡಾ|| ಜಯಚಂದ್ರಗುಪ್ತ ಕೆ.ಕೆ
ಹಾಸನ

ಕವನ - 5, ಕಪಟ
ಖಾದಿ, ಕಾವಿಯ ತೊಟ್ಟು
ಖಾಕಿಯ ಕೈಯಲಿ ಹಿಡಿದು
ಕಡಿಯುವರು ಕುರಿಯಂತೆ
ನನ್ನ ಬಂಧುಗಳಾ ಗುಣವಾ
ಹಾರವಾ ಧರಿಸಿ ಪೂಜಿಸಿದಂತೆ,
                     ದೆವ್ವ ದೇವರು ಎನುತಾ
                     ನರರ ಬುರುಡೆಯ ಹಿಡಿದು
                     ನಿಂಬೆಯ ಹಣ್ಣಿನಲಿ ಭಯವಿಟ್ಟು
                     ಬರಿದ ಮಾಡ್ವರು ಕಿಸೆಯ
ಸತ್ಯ ಸುಳ್ಳುಗಳೆನುತ
ಎದೆಗೆ ಚಿನ್ನದಾ ಬರೆಯಿಟ್ಟು
ದೋಚಿದರು ಎಲ್ಲವನು
ನೋಯಿಸಿ ಬರೆಸುವರು ಅಳುವಾ
ವಸ್ತ್ರದೊಳು ಕಾವನಿಟ್ಟು
                    ಕೊಡೆಯಿಡಿವರು ಮಳೆಗೆ
                    ದಡವು ನೆತ್ತಿಗೆ ತಾಕುವಂತೆ
                    ಕೈಯಿಡುವರು ತಲೆಗೆ
                    ಒದ್ದೆಯ ಒರೆಸುವಂತೆ
                    ಕಾಣ್ವರು ಎಲ್ಲಾ ಬೆಳ್ಳನೆ
ಲೇಖಕ - ಪ್ರದೀಪ್, ಹಾಸನ

 ಕವನ - ಯಾರಿವಳು 
ಯಾರಿವಳು .......  ಆಹ ಯಾರಿವಳು .......
ಪ್ರೀತಿಯ ಬೀಜವ ನನ್ನಲಿ ಬಿತ್ತಿದವಳು
                ಊರಗೌಡನ ತೋಟ್ಟಿ ಮನೆಯಲಿ
                ಕದ್ದು ನಿಂತು ಮುಗುಳ್ನಗೆ ಬೀರಿದವಳು
               ಮಲ್ಲಿಗೆ ಹೂ ಮುಡಿಯಲಿರಿಸಿ ತಳತಳ ಹೋಳೆದವಳು
ಅಲ್ಲಿಗೂ ಬಂದು ಇಲ್ಲಿಗೂ ಬಂದು
ಮನದಲ್ಲೆ ಯಾರನೋ ಹುಡುಕುತಿಹಳು
ತನ್ನ ಹಾಡಲ್ಲೇ ಪ್ರೀತಿಯ ನವಿ ನವಿದವಳು
               ನವುಳಂತೆ ಮನದಲ್ಲೇ ಕುಣಿದಿಹಳು
               ಇವಳಂದಕ್ಕೆ ಹುಣ್ಣಿಮೆ ಚಂದಿರನೆ ನಾಚಿದನು.
               ಹೋ ಕತ್ತಲೆಯಲ್ಲೇ ಬೆಳಕ ನೀಗಿಸುವಳು.
ಲೇಖಕ - ದ್ಯಾವನೂರು ಮಂಜುನಾಥ್
ಹಾಸನ
      
ಸಂಚಾಲಕರು 
ಮನೆಮನೆ ಕವಿಗೋಷ್ಠೀ-187

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ